ಓಸಿಲಾಟ್: ಬೆಕ್ಕಿನ ಕುಟುಂಬಕ್ಕೆ (ಫೆಲಿಡೀ) ಸೇರಿದ ಫಿಲಿಸ್ ಪಾರ್ಡಾಲಿಸ್ ಎಂಬ ಪ್ರಾಣಿ. ದಕ್ಷಿಣ ಅಮೆರಿಕದ ಕೆಲವು ಪ್ರದೇಶಗಳಲ್ಲಿ ವಾಸಿಸುವುದು. ದೊಡ್ಡ ಪ್ರಮಾಣದ ಮನೆಯ ಬೆಕ್ಕಿಗಿಂತೇನೂ ಅತಿ ದೊಡ್ಡದಲ್ಲ. ಎತ್ತರ ಸು. ಅರ್ಧ ಮೀಟರು, ಉದ್ದ ಸು. ಒಂದು ಮೀಟರು. ದೇಹದ ಬಣ್ಣ ಬೂದು ಅಥವಾ ಕಂದು. ಮೈಮೇಲೆ ಕಪ್ಪು ಮಚ್ಚೆಗಳಿವೆ. ಕತ್ತಿನ ಮೇಲೆ ಕೆನ್ನೆಯ ಮೇಲೆ ಕಪ್ಪು ಪಟ್ಟೆಗಳಿವೆ. ಹೊಟ್ಟೆ ಬಿಳಿ, ಕಾಡಿನಲ್ಲಿ ವಾಸಿಸುವ ಇದನ್ನು ಕೆಲವರು ಮನೆಗಳಲ್ಲಿ ಸಾಕುವರು. ಮಾಂಸಾಹಾರಿ, ಬಹಳ ಚೆನ್ನಾಗಿ ಮರ ಹತ್ತಬಲ್ಲುದು. ತನ್ನ ಆಹಾರವನ್ನು ಬೇಟೆಯಾಡಿ ಹಿಡಿದು ತಿನ್ನುವುದು. ಹಿಡಿದ ಪ್ರಾಣಿಯ ಶರೀರವನ್ನು ಹರಿಯುವುದಕ್ಕೂ ಕತ್ತರಿಸುವುದಕ್ಕೂ ಅನುಕೂಲವಾದ ಹಲ್ಲುಗಳಿವೆ. ಮುಂದಿನ ಹಲ್ಲುಗಳು ಸಣ್ಣದಾಗಿವೆ. ಕೋರೆ ಹಲ್ಲುಗಳು ದೊಡ್ಡದಾಗಿ ಚೂಪಾಗಿವೆ. ದವಡೆ ಹಲ್ಲುಗಳಲ್ಲಿ ಮೊನಚಾದ ತುದಿಗಳಿರುವುದರಿಂದ ಕತ್ತರಿಯಂತೆ ಕತ್ತರಿಸುತ್ತವೆ. ತಲೆಬುರುಡೆಯ ಹಿಂಭಾಗ ಎತ್ತರವಾಗಿ ಮೊನಚಾಗಿದೆ. ಇದಕ್ಕೆ ಕತ್ತಿನ ಬಲವಾದ ಸ್ನಾಯುಗಳು ಸೇರಿಕೊಂಡಿವೆ. ಹಿಡಿದ ಬೇಟೆ ಒದ್ದಾಡಿ ತಪ್ಪಿಸಿಕೊಳ್ಳದಂತೆ ಇವು ಸಹಾಯಮಾಡುತ್ತವೆ. ಅಲ್ಲದೆ ಕೆಳದವಡೆ ಮೇಲಕ್ಕೆ ಕೆಳಗೆ ಮಾತ್ರ ಆಡಬಲ್ಲುದು, ಎಡಬಲಕ್ಕೆ ಆಡಲಾರದು. ಬೇಟೆ ತಪ್ಪಿಸಿಕೊಳ್ಳದಂತೆ ಇದು ಸಹ ಸಹಾಯ ಮಾಡುತ್ತದೆ. ಬೆರಳುಗಳಲ್ಲಿರುವ ಮೊನಚಾದ ಬಾಗಿದ ನಖಗಳನ್ನು ಮೃದುವಾದ ಚೀಲಗಳೊಳಗೆ ಎಳೆದುಕೊಳ್ಳಬಲ್ಲದು. ಸಾಮಾನ್ಯವಾಗಿ ಒಂದು ಸಲಕ್ಕೆ ಎರಡು ಮರಿಗಳನ್ನು ಈಯುತ್ತದೆ.	(ಎಸ್.ಎನ್.ಕೆ.ಯು.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ